GAP Practices in Mango Production2019-06-10T07:15:11+00:00
mango-board-kannada-slider-01

ಮಾವು ಉತ್ಪಾದನೆಯಲ್ಲಿ ಉತ್ತಮ ಕೃಷಿ ಪದ್ದತಿ ಕ್ರಮಗಳು

 • ನೀರು ಸರಾಗವಾಗಿ ಬಸಿದು ಹೋಗುವ, ಆಳವಾದ ಮರಳು ಮಿಶ್ರಿತ ಕೆಂಪು ಮಣ್ಣು ಮಾವಿನ ಬೆಳೆಗೆ ಹೆಚ್ಚು ಸೂಕ್ತ.
 • ಮೆಕ್ಕಲು ಮಣ್ಣು ಮತ್ತು ಜಂಬಟ್ಟಿಗೆ ಮಣ್ಣಿನಲ್ಲೂ ಈ ಬೆಳೆಯನ್ನು ಸಮೃದ್ಧವಾಗಿ ಬೆಳೆಯಬಹುದಾಗಿದೆ.
 • ಮಾವಿನ ತೋಟಗಳಲ್ಲಿ ಮುಂಗಾರು ಪ್ರಾರಂಭದಲ್ಲಿ ಹಿಂದಿನ ಅವಧಿಯ ಅವಶೇಷಗಳನ್ನು ವಿಲೇವಾರಿ ಮಾಡುವುದು.
 • ತೋಟಗಳನ್ನು ಉಳುಮೆ ಮಾಡಿ ಚೆನ್ನಾಗಿ ಸೂರ್ಯನ ಬೆಳಕಿಗೆ ಪ್ರಕಾಶಿಸಿದ್ದಲ್ಲಿ ಮಣ್ಣಿನಲ್ಲಿ ಅವಿತ ಕೀಟಗಳು ನಾಶವಾಗಲು ಸಹಕಾರಿಯಾಗುತ್ತದೆ.
 • ಅಗತ್ಯವಿದ್ದಲ್ಲಿ ಸ್ಥಳೀಯ ಬೆಳೆಯ ಪದ್ಧತಿಯ ಸೂಕ್ತತೆಗೆ ಅನುಗುಣವಾಗಿ ಪರಂಗಿ, ಬಾಳೆ, ಸಪೋಟಾ, ನಿಂಬೆ, ಈರುಳ್ಳಿ, ಮೆಣಸಿನಕಾಯಿ ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ.

ಸಮಾನ ಕೀಟ ಆತಿಥ್ಯ (Similar Host Pest Crop) ಬೆಳೆಗಳನ್ನು ಹೊರತುಪಡಿಸಿ ಇತರೆ ಬೆಳೆಗಳನ್ನು ಬೆಳೆಯಬಹುದಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಅಂದರೆ, ಜೂನ್-ಜುಲೈ ತಿಂಗಳಲ್ಲಿ ಮಾವಿನ ಸಸಿಗಳನ್ನು ನೆಡುವುದು ಸೂಕ್ತ. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲೂ ಸಹ ಸಸಿಗಳನ್ನು ನೆಡಬಹುದು. ಬೆಳೆಯುವ ಪ್ರದೇಶ, ಹವಾಮಾನ ಹಾಗೂ ತಳಿಗಳಿಗನುಸಾರವಾಗಿ ಯೋಗ್ಯವಾದ  ಅಂತರದಲ್ಲಿ ಸಸಿಗಳನ್ನು ನೆಡುವುದು ಸೂಕ್ತ. ಸಾಮಾನ್ಯವಾಗಿ ಕೆಳಗೆ ನಮೂದಿಸಿದ ಅಂತರದಲ್ಲಿ ಸಸಿ/ಗಿಡಗಳನ್ನು ನೆಡುವುದು ರೂಢಿಯಲ್ಲಿದೆ.

ಕ್ರ.ಸಂ. ಅಂತರ ಗಿಡದಿಂದ ಗಿಡಕ್ಕೆ ಗಿಡಗಳ ಸಂಖ್ಯೆ (ಹೆ)
1 6 ಮೀ x 6 ಮೀ 277
2 8 ಮೀ x 8 ಮೀ 156
3 9 ಮೀ x 9 ಮೀ 120-125
4 10 ಮೀ x 10 ಮೀ 100
5 5 ಮೀ x 5 ಮೀ 800
6 2.5 ಮೀ x 2.5 ಮೀ 1600

ಇತ್ತಿಚೀನ ದಿನಗಳಲ್ಲಿ ಅನೇಕ ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಈ ತಳಿಗಳು ಕುಬ್ಜವಾಗಿರುತ್ತವೆ. ರೆಂಬೆಗಳ ಬದಿ ಹರಡುವಿಕೆ ಕಡಿಮೆಯಾಗಿದ್ದು, ಗಿಡಗಳನ್ನು ನೆಡುವಾಗ ಮಧ್ಯದ ಅಂತರವನ್ನು ಕಡಿಮೆ ಇಟ್ಟು ಗಿಡ ನೆಟ್ಟಲ್ಲಿ ಹೆಚ್ಚಿನ ಸಾಂದ್ರ (High Density Planting) ಕೃಷಿ ಎನ್ನುವರು. ಮಾವಿನ ಹೆಚ್ಚಿನ ಸಾಂದ್ರ ಕೃಷಿಯಲ್ಲಿ 2.5 ಮೀ. X 2.5 ಮೀ. (ಹೆಕ್ಟೇರಿಗೆ 1600 ಗಿಡಗಳು) ಅಥವಾ 5 ಮೀ. X 5 ಮೀ. (ಹೆಕ್ಟೇರ್ ಗೆ 800 ಗಿಡಗಳು) ಅಂತರದಲ್ಲಿ ಗಿಡಗಳನ್ನು ನೆಡಬಹುದಾಗಿದೆ.

ಮಾವಿನ ಬೆಳೆಯಲ್ಲಿ ಕಾಯಿ/ಹಣ್ಣುಗಳ ಉದುರುವಿಕೆ ಒಂದು ನಿರಂತರ ಬಾಧೆ. ಸಾಮಾನ್ಯವಾಗಿ ಉದುರುವಿಕೆ ಎರಡು ಹಂತಗಳಲ್ಲಿ ಕಂಡು ಬರುವುದು. ಹೂಗಳು ಮಿಡಿ ಕಚ್ಚಿ ಸುಮಾರು 20 ದಿನಗಳ ನಂತರ ಹಾಗೂ ಸುಮಾರು 28-35 ದಿನಗಳ ನಂತರ ಬಲಿತ ಮಿಡಿಕಾಯಿಗಳು ಉದುರುವುದು ಕಂಡು ಬರುವುದು. ಮಾವು ಸ್ಲೆಷಲ್ ಬಳಸಿದ ತೋಟಗಳಲ್ಲಿ ಹೂ ಉದುರುವುದು ಕಡಿಮೆಯಾಗಿ ಹೆಚ್ಚು ಕಚ್ಚಿ, ರೈತರು ಅಧಿಕ ಇಳುವರಿ ಗಳಿಸಿದ್ದಾರೆ. ವಿಜ್ಞಾನಿಗಳು ರೈತರ ತಾಕುಗಳಲ್ಲಿ ನಡೆಸಿರುವ ಪ್ರಯೋಗಗಳಿಂದ ಕೂಡ ಈ ಅಂಶ ದೃಢಪಟ್ಟಿದೆ.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ರವರು ಹೊರತಂದಿರುವ “Mango Special” ಅನ್ನು ಪ್ರತಿ 10 ಲೀಟರ್ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು. ಈ ಸಿಂಪರಣ ದ್ರಾವಣಕ್ಕೆ ಟೀಪಾಲ್ ಅಥವಾ APSA-80 ಅಥವಾ ACTIVE-80  ದ್ರಾವಣವನ್ನು 3-4 ಮಿ.ಲೀ./ಲೀ. ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು.

ತೋಟದಲ್ಲಿ ಬೆಳೆಯುತ್ತಿರುವ ಮಾವಿನ ಗಿಡದ ಕಾಂಡವನ್ನು ಕೀಟ/ರೋಗಗಳಿಂದ ರಕ್ಷಿಸುವುದು ತುಂಬಾ ಅವಶ್ಯಕ, ಇದಕ್ಕಾಗಿ ಕಾಂಡ ರಕ್ಷಕ ಪೇಸ್ಟ್ ಬಳಿಯಬೇಕು.

ಕಾಂಡ ರಕ್ಷಕ ಪೇಸ್ಟ್ ಸಿದ್ಧಪಡಿಸಲು ಕಾಪರ್ ಆಕ್ಸಿಕ್ಲೋರೈಡ್ 40 ಗ್ರಾಂ + ಕ್ಲೋರೋಪೈರಿಫಾಸ್ 10 ಮಿ.ಲಿ. + ಹೆಕ್ಸಾಕೊನ್‍ಜೋಲ್ 5 ಮಿ.ಲೀ + ನೀರಿನಲ್ಲಿ ಕರಗುವ ಬಿಳಿ ಡಿಸ್ಟೆಂಪರ್ 100 ಮಿ.ಲೀ ಗಳ ಮಿಶ್ರಣವನ್ನು ಒಂದು ಲೀ. ನೀರಿನಲ್ಲಿ ಬೆರೆಸಿ, ಈ ಪೇಸ್ಟ್ ಅನ್ನು ನೆಲದಿಂದ ಮೇಲಕ್ಕೆ 1 ಮೀ. ಎತ್ತರದವರೆಗೆ ಕಾಂಡಕ್ಕೆ ಬಳಿಯಬೇಕು..

ಕಾಂಡ ಕೊರಕದಿಂದ ಬಳಲುತ್ತಿರುವ ಮರಗಳನ್ನು ಬಹುದೂರದಿಂದಲೇ ಗಮನಿಸಬಹುದು. ಮರದ ಮೇಲ್ಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳು ಉದುರಲು ಆರಂಭಿಸುತ್ತವೆ. ದಿನ ಕಳೆದಂತೆ ಎಲೆಗಳೆಲ್ಲಾ ಉದುರಿ ರೆಂಬೆ ಕೊಂಬೆಗಳು ಒಣಗಲಾರಂಭಿಸುತ್ತದೆ. ಈ ಲಕ್ಷಣವನ್ನು “ತುದಿ ಸಾಯುವ ಲಕ್ಷಣ” ವೆಂದು ಕರೆಯಲಾಗುತ್ತದೆ. ರೈತರು ಈ ಹಂತದಲ್ಲಿ ಯಾವುದೇ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮರವು ಶೀಘ್ರವಾಗಿ ಒಣಗುವುದು. ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ತಡ ಮಾಡಿದರೆ ಇಡೀ ತೋಟವೆಲ್ಲಾ ಒಣಗುತ್ತದೆ.

ಕಾಂಡ ಕೊರಕದ ಹುಳುಗಳು ಕಾಂಡ ಕೊರೆಯುವಾಗ ಮರದಿಂದ ಹೊಟ್ಟು ಹೊರಗೆ ಬೀಳುತ್ತಿರುತ್ತದೆ. ಈ ಹೊಟ್ಟು ಮೊದಮೊದಲಿಗೆ ತಿಳಿ ಬಣ್ಣ ಹೊಂದಿರುತ್ತದೆ. ಆದರೆ ದಿನ ಕಳೆದಂತೆ ಈ ಹೊಟ್ಟು ಕಡು ಬಣ್ಣಕ್ಕೆ ತಿರುಗಿ ಕೊನೆಕೊನೆಗೆ ಕಪ್ಪಾಗುತ್ತದೆ. ಈ ಮೇಲ್ಕಂಡ ಲಕ್ಷಣಗಳು ಕಂಡು ಬಂದಲ್ಲಿ ರೈತ ಬಾಂಧವರು ತಕ್ಷಣವೇ ಸೀಲರ್ ಕಮ್ ಹೀಲರ್ ಔಷಧದಿಂದ ಕೊರಕದ ರಂಧ್ರ ಮುಚ್ಚಿ ಗಾಯದ ಮೇಲೆ ಸವರಿ ಕಾಂಡದ ಕೆಳಭಾಗದಿಂದ 3-4 ಅಡಿಯವರಗೆ ಬಳಿಯಬೇಕು.

ಅವಧಿ : ಹೂ ಕಚ್ಚಿದಾಗಿನಿಂದ ಮಾವಿನ ಹಣ್ಣಿನ ಪಕ್ವತೆಯ ಅವಧಿಯು ತಳಿವಾರು ಬೇರೆ ಬೇರೆ ಇದ್ದು, ವಿವರಗಳು ಕೆಳಗಿನಂತಿವೆ.

ತಳಿಗಳು ಕಾಯಿ ಕಚ್ಚಿದ ದಿನದಿಂದ ಬಲಿಯುವಿಕೆ ಅವಧಿ
ಸೆಂದೂರ 80-85 ದಿನಗಳು
ರಸಪುರಿ 85-90 ದಿನಗಳು
ಬಾದಾಮಿ 90-100 ದಿನಗಳು
ಬೆನೇಶಾನ/ಬಂಗನಪಲ್ಲಿ 110 ದಿನಗಳು
ಮಲಗೋವಾ 120 ದಿನಗಳು
ಮಲ್ಲಿಕಾ 120 ದಿನಗಳು
ತೋತಾಪುರಿ 140-145 ದಿನಗಳು
ನೀಲಂ 150 ದಿನಗಳು

ಮಾವಿನ ಹಣ್ಣುಗಳನ್ನು ಸ್ಥಳೀಯ ಅಥವಾ ದೂರ ದೇಶದ ಮಾರುಕಟ್ಟೆಗೆ ರವಾನಿಸಲು ಹಲವು ನಮೂನೆಯ ಪೆಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ಹಣ್ಣುಗಳನ್ನು ಕಾಗದದ ರಟ್ಟಿನ ಪೆಟ್ಟಿಗೆಗಳಲ್ಲಿ ಒಂದು ಅಥವಾ ಅನೇಕ ಪದರಗಳಲ್ಲಿ ಜೋಡಿಸಿ ಕಟ್ಟುತ್ತಾರೆ. ಇದರಲ್ಲಿ ಮರದ ಹೊಟ್ಟು, ಭತ್ತದ ಹುಲ್ಲು ಅಥವಾ ಕಾಗದದ ಚೂರುಗಳನ್ನು ಮೆತ್ತನೆಯ ವಸ್ತುವಾಗಿ ಉಪಯೋಗಿಸುತ್ತಾರೆ. ಮರದ ಅಥವಾ ನೂಲುಯುಕ್ತ ಕಾಗದದ ರಟ್ಟಿನ ಪೆಟ್ಟಿಗೆಯಲ್ಲಿ ಒಂದು ಅಥವಾ ಎರಡು ಪದರಗಳಲ್ಲಿ 4 ಅಥವಾ 14 ಕೊಡಗಳಾಗಿ ವಿಂಗಡಿಸಿ ಇಡಲಾಗುವುದು. ಪ್ರತಿ ಪೆಟ್ಟಿಗೆಯ ಗಾತ್ರ ಸಾಮಾನ್ಯವಾಗಿ (45x26x17 ಸೆಂ.ಮೀ) ಅಥವಾ (32x26x10 ಸೆಂ.ಮೀ) ಇರುತ್ತದೆ.

1 ಲೀಟರ್ ನೀರಿಗೆ 100 ಗ್ರಾಂ ಬೆಲ್ಲ + 50 ಮಿ.ಲೀ. ಪ್ರೊಟೀನ್ ಹೈಡ್ರೋಲೈಸೆಟ್ (Protein Hydrolysate) (Peptone) (CR001) ಅಥವಾ ಈಸ್ಟ್ (Yeast extract) (RM 027-500g) + 2.0 ಮಿ.ಲೀ ಡಿಡಿವಿಪಿ/ಮೆಲಾಥಿಯಾನ್/ಡೆಕಾಮೆಥ್ರಿನ್ ಕೀಟನಾಶಕ ಬೆರೆಸಿ, ದ್ರಾವಣವನ್ನು ಮರದ ಬೊಡ್ಡೆಯ ಮೇಲೆ ಭೂಮಿಯಿಂದ 2-3 ಅಡಿ ಎತ್ತರದವರೆಗೆ ಬ್ರಷ್  ಸಹಾಯದಿಂದ ಬಳಿಯಬೇಕು. ಪ್ರತಿ ಗಿಡಕ್ಕೆ 50-100 ಮಿ.ಲೀ ದ್ರಾವಣವನ್ನು ಬಳಸಬಹುದು. ಈ ಪದ್ಧತಿಯನ್ನು ಕಟಾವು ಆಗುವವರೆಗೆ ವಾರಕ್ಕೊಮ್ಮೆ ಪಾಲಿಸಿದಲ್ಲಿ, ಗಂಡು ಮತ್ತು ಹೆಣ್ಣು ಹಣ್ಣಿನ ನೊಣಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ.

ಅನುಪಯುಕ್ತ ರೆಂಬೆಗಳನ್ನು ಗರಗಸದಿಂದ ನುಣುಪಾಗಿ ಕತ್ತರಿಸುವುದು, ಕತ್ತರಿಸಿದ

ಭಾಗಕ್ಕೆ ಬೋರ್ಡೋ ಮುಲಾಮು ಹಚ್ಚುವುದು.

 • ಹಳೆಯ ಮತ್ತು ಅನುತ್ಪಾದಕ ಗಿಡಗಳನ್ನು ಬುಡದ ಮೇಲ್ಭಾಗದಲ್ಲಿ ದೊಡ್ಡ ರೆಂಬೆಗಳನ್ನು ಕತ್ತರಿಸಿ ಬೋರ್ಡೋ ಮುಲಾಮು ಹಚ್ಚುವುದು, ಅಗತ್ಯವಿದ್ದಲ್ಲಿ ಉತ್ತಮ ತಳಿಯೊಂದಿಗೆ ಚಿಗರೊಡೆದ ರೆಂಬೆಗಳನ್ನು ಕಸಿ ಕಟ್ಟಬಹುದಾಗಿದೆ.
 • ಈ ಚಿಗುರುಗಳಲ್ಲಿ ಪ್ರತಿ ರೆಂಬೆಗೆ 2-3 ಚಿಗುರುಗಳನ್ನು ಉಳಿಸಿಕೊಂಡು ಉಳಿದ ಚಿಗುರುಗಳನ್ನು ಚಿವುಟಿ ಹಾಕಬೇಕು.
 • ಚಿಗುರುಗಳು ಪೆನ್ಸಿಲ್ ಗಾತ್ರಕ್ಕೆ ಬೆಳೆದಾಗ ಆಗಸ್ಟ್ – ಸೆಪ್ಲೆಂಬರ್ ತಿಂಗಳಿನಲ್ಲಿ, ಮತ್ತೆ ಹೊಸ ಚಿಗುರನ್ನು ಅಡ್ಡಕ್ಕೆ ಕತ್ತರಿಸಿ, ಕತ್ತರಿಸಿದ ಭಾಗದಿಂದ 2 ರಿಂದ 2.5 ಸೆಂ.ಮೀ. ಆಳಕ್ಕೆ ನೇರವಾಗಿ ಸೀಳಬೇಕು.
 • ಸೀಳಿದ ಭಾಗದೊಳಗೆ ಬೆಣ್ಣೆಯಾಕಾರದಲ್ಲಿ ತಯಾರಿಸಿದ 4-5 ಉಬ್ಬಿದ ಕಣ್ಣುಗಳನ್ನು ಹೊಂದಿರುವ ಅಷ್ಟೇ ಗಾತ್ರದ ಸುಮಾರು 10 ಸೆಂ.ಮೀ. ಉದ್ದ ಆಯ್ದ ತಳಿಯ ಕಸಿಕಡ್ಡಿಯನ್ನು ಸಮರ್ಪಕವಾಗಿ ಜೋಡಿಸಿ, ಪಾಲಿಥೀನ್ ಟೇಪಿನಿಂದ ಸುತ್ತಿ ಕಟ್ಟಬೇಕು.

ಮಾವಿನ ಕಾಯಿ ನಿಂಬೆ ಹಣ್ಣಿನ ಗಾತ್ರದಷ್ಟು ಆದಾಗ ಪ್ರತಿ ಕಾಯಿಯನ್ನು ಕಾಗದದ ಚೀಲ (Butter paper bag) ದಿಂದ ಕಟ್ಟುವುದರಿಂದ ಕಾಯಿಯ ಬೆಳವಣಿಗೆಯ ಹಂತದಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಕಾಗದದ ಚೀಲದಿಂದ ಸಂರಕ್ಷಿಸಿದ ಹಣ್ಣು ಉತ್ತಮ ಬೆಳವಣಿಗೆ ಹೊಂದಿ ಸಮಾನಂತರ ಬಣ್ಣದಿಂದ ಕೂಡಿ ಉತ್ತಮ ಗುಣಮಟ್ಟದ ಫಸಲು ಪಡೆಯಬಹುದಾಗಿರುತ್ತದೆ. ಈ ವಿಧಾನವನ್ನು ಕುಬ್ಜ ಗಿಡಗಳಲ್ಲಿ ಮತ್ತು ಅಧಿಕ ಸಾಂದ್ರತೆಯ ತೋಟಗಳಿಗೆ ಅಧಿಕ ಮೌಲ್ಯದ ತಳಿಗಳಲ್ಲಿ (ಬಾದಾಮಿ, ಇಮಾಮ್ ಪಸಂದ್, ಮಲ್ಲಿಕಾ, ಬೆನಿಶಾನ್, ಮಲಗೋವಾ) ಸರಳವಾಗಿ ಸಾವಯವ ಉತ್ಪಾದನೆ ಕ್ರಮವಾಗಿ ಉಪಯೋಗಿಸಬಹುದು.

ಪ್ರತಿ ವರ್ಷವೂ ಎಲ್ಲಾ ವಯಸ್ಸಿನ ಗಿಡಗಳಿಗೂ ಸುಮಾರು 50 ಕಿ.ಗ್ರಾಂ (ಸುಮಾರು 5 ಮಂಕರಿ) ಕೊಟ್ಟಿಗೆ ಗೊಬ್ಬರ ಕೊಡುವುದು ಉತ್ತಮ. ಇದರೊಂದಿಗೆ ಗಿಡಗಳ ವಯಸ್ಸಿಗೆ ಅನುಗುಣವಾಗಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರಗಳನ್ನು ಪ್ರತಿ ವರ್ಷವೂ ಈ ಕೆಳಗೆ ಹೇಳಿದ ಪ್ರಮಾಣದಲ್ಲಿ ಕೊಡಬೇಕು.

ಮಾವಿನ ತೊಟ್ಟಿನಲ್ಲಿರುವ ಸೋನೆಯು ಕಟಾವು ಮಾಡಿದ ಹಣ್ಣಿನ ಮೇಲೆ ಬಿದ್ದಲ್ಲಿ ಕಪ್ಪು ಕಲೆಯಾಗಿ ಹಣ್ಣಿನ ಗುಣಮಟ್ಟ ಕಡಿಮೆಯಾಗುತ್ತದೆ.

ಕಟಾವಿನ ನಂತರ ಹಣ್ಣಿನ ತೊಟ್ಟಿನಲ್ಲಿರುವ ಸೋನೆಯನ್ನು ತೆರುವುಗೊಳಿಸಲು ಹಣ್ಣುಗಳನ್ನು ಡಿ-ಸ್ಯಾಪಿಂಗ್ ಟೇಬಲ್ ಗಳಲ್ಲಿ ಜೋಡಿಸಿ ಸುಮಾರು 4 ಗಂಟೆಗಳ ಸಮಯದ ನಂತರ ಹಣ್ಣುಗಳನ್ನು ಮಾಗಿಸುವ ಘಟಕಕ್ಕೆ ಪ್ಲಾಸ್ಟಿಕ್ ಕ್ರೇಟ್ ಗಳಲ್ಲಿ ಸಾಗಿಸಬೇಕು.

ಮಾವು ಕಟಾವಿನ ನಂತರ ಹಣ್ಣುಗಳನ್ನು ಪ್ಲಾಸ್ಟಿಕ್ ಕ್ರೇಟ್ಸ್ ಗಳಲ್ಲಿ ಜೋಡಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಕ್ರಮಗಳನ್ನು ಅನುಸರಿಸುವುದರಿಂದ ಕೊಯ್ಲು ನಂತರದ ಹಾನಿಯನ್ನು ತಡೆಗಟ್ಟಬಹುದಾಗಿದ್ದು, ಹಣ್ಣಿನ ಜೀವಿತ ಅವಧಿಯನ್ನು ಹೆಚ್ಚಿಸಬಹುದಾಗಿದ್ದು, ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದಿಂದಾಗಿ ಹೆಚ್ಚಿನ ಬೆಲೆ ದೊರಕಿಸಿಕೊಡುವಲ್ಲಿ ಸಹಕಾರಿಯಾಗಲಿದೆ.

ಹೊಸದಾಗಿ ನಾಟಿ ಮಾಡಿರುವ ಗಿಡಗಳಿಗೆ ಮೂರನೇ ಮೇಲು ಗೊಬ್ಬರವಾಗಿ ಯೂರಿಯಾ 50 ಗ್ರಾಂ., ಸೂಪರ್ ಫಾಸ್ಪೇಟ್ 125 ಗ್ರಾಂ. ಹಾಗೂ ಎಂ.ಒ.ಪಿ. 40 ಗ್ರಾಂ., ರಂತೆ ಪ್ರತಿ ಗಿಡಕ್ಕೆ ನೀಡುವುದು. ಗೊಬ್ಬರವನ್ನು ಗಿಡದ ಬುಡದಿಂದ 6 ಇಂಚು ದೂರದಲ್ಲಿ ಹಾಕಿ ತಕ್ಷಣ ನೀರು ಕೊಡಬೇಕು.

ಮಾವಿನ ಗಿಡಗಳ ವಯಸ್ಸು ಸರಾಜನಕ (N)

ಪ್ರತಿ ಗಿಡಕ್ಕೆ/ಗ್ರಾಂ

ರಂಜಕ (P)

ಪ್ರತಿ ಗಿಡಕ್ಕೆ/ಗ್ರಾಂ

ಪೋಟ್ಯಾಶಿಂ (K) ಪ್ರತಿ ಗಿಡಕ್ಕೆ/ಗ್ರಾಂ
ಒಂದು 75 20 70
ಎರಡು 150 40 140
ಮೂರು 225 60 210
ನಾಲ್ಕು 300 80 280
ಐದು 375 100 350
ಆರು 450 120 420
ಏಳು 525 140 490
ಎಂಟು 600 160 560
ಒಂಬತ್ತು 675 180 630
ಹತ್ತು ಹಾಗೂಮೇಲ್ಪಟ್ಟು 750 200 700

ಹೊಸದಾಗಿ ನಾಟಿ ಮಾಡಿರುವ ಗಿಡಗಳಿಗೆ ಮೂರನೇ ಮೇಲು ಗೊಬ್ಬರವಾಗಿ ಯೂರಿಯಾ 50 ಗ್ರಾಂ., ಸೂಪರ್ ಫಾಸ್ಪೇಟ್ 125 ಗ್ರಾಂ. ಹಾಗೂ ಎಂ.ಒ.ಪಿ. 40 ಗ್ರಾಂ., ರಂತೆ ಪ್ರತಿ ಗಿಡಕ್ಕೆ ನೀಡುವುದು. ಗೊಬ್ಬರವನ್ನು ಗಿಡದ ಬುಡದಿಂದ 6 ಇಂಚು ದೂರದಲ್ಲಿ ಹಾಕಿ ತಕ್ಷಣ ನೀರು ಕೊಡಬೇಕು.

ಮಾವಿನ ಗಿಡಗಳ ವಯಸ್ಸು ಸರಾಜನಕ (N)

ಪ್ರತಿ ಗಿಡಕ್ಕೆ/ಗ್ರಾಂ

ರಂಜಕ (P)

ಪ್ರತಿ ಗಿಡಕ್ಕೆ/ಗ್ರಾಂ

ಪೋಟ್ಯಾಶಿಂ (K) ಪ್ರತಿ ಗಿಡಕ್ಕೆ/ಗ್ರಾಂ
ಒಂದು 75 20 70
ಎರಡು 150 40 140
ಮೂರು 225 60 210
ನಾಲ್ಕು 300 80 280
ಐದು 375 100 350
ಆರು 450 120 420
ಏಳು 525 140 490
ಎಂಟು 600 160 560
ಒಂಬತ್ತು 675 180 630
ಹತ್ತು ಹಾಗೂಮೇಲ್ಪಟ್ಟು 750 200 700

ಮಾವು ಸುಣ್ಣವನ್ನು ಬಯಸುವ ಬೆಳೆಯಾಗಿದ್ದು (Calcium loving crop), ರಾಜ್ಯದ ಮಾವು ಬೆಳೆಯುವ ಪ್ರದೇಶದಲ್ಲಿನ ಮಣ್ಣುಗಳಲ್ಲಿ ಸುಣ್ಣದ ತೀವ್ರ ಕೊರತೆ ಇರುವುದು ಕಂಡುಬಂದಿದೆ. ಸುಣ್ಣವು ಮಾವಿನ ಅಂಗಾಂಶ (tissue) ಗಳ ಆರೋಗ್ಯಕ್ಕೆ ಅತಿ ಅವಶ್ಯಕವಿರುತ್ತದೆ.

ಮಾವಿನಲ್ಲಿ  ಸುಣ್ಣದ ಕೊರತೆ ಲಕ್ಷಣಗಳು :

 • ಗಿಡಗಳ ಬೆಳವಣಿಗೆಗೆ ಕುಂಠಿತವಾಗುವುದು.
 • ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ.

ನಂತರ ಗಿಡದ ಬುಡದ ಕಾಂಡದಲ್ಲಿ ತೀವ್ರತರವಾದ ಬಿರುಕುಗಳು

 • ಕಾಣಬರುತ್ತವೆ. (1 ಮೀಟರ್ ವರೆಗೆ)
 • ಬಿರುಕುಗಳಲ್ಲಿ ಅಂಟು ಸೋರುವುದು ಸಹ ಕಾಣಬಹುದು.
 • ಗಿಡದ ರೆಂಬೆಗಳು ಮೇಲಿನಿಂದ ಒಣಗುತ್ತವೆ (Die-back)
 • ಹಣ್ಣಿನ ಇಳುವರಿ ನಷ್ಟ ಕಡಿಮೆಯಾಗುತ್ತದೆ.
 • ಹೂ, ಕಾಯಿ ಬಿಡದೆ ಗಿಡವು ಬರಡಾಗುತ್ತದೆ.
 • ಹಣ್ಣುಗಳಲ್ಲಿ ಗರ್ಭ (Spongy tissue) ಬೆಳೆಯುತ್ತದೆ.

ಮಾವಿನ ಗಿಡಗಳಿಗೆ ಅರಳಿದ ಸುಣ್ಣ ನೀಡಬೇಕು. ಮಳೆ ಗಾಲದ ಪ್ರಾರಂಭ (June – July) ದಲ್ಲಿ ಸುಣ್ಣ ನೀಡುವುದು ಹೆಚ್ಚು ಅಪೇಕ್ಷಣೀಯ ನೀರಾವರಿ ಸೌಕರ್ಯವಿದ್ದರೆ, ಇತರ ತಿಂಗಳುಗಳಲ್ಲಿ ಸಹ ನೀಡಬಹುದು. ಪ್ರತಿ ವರ್ಷ ಸುಣ್ಣ ನೀಡುವ ಅಗತ್ಯತೆ ಇಲ್ಲ. 2-3 ವರ್ಷಕ್ಕೊಮ್ಮೆ ನೀಡಬಹುದಾಗಿದೆ.

ಮಾವಿನ ಗಿಡಗಳಿಗೆ ಸುಣ್ಣ ನೀಡುವಿಕೆ ಪ್ರಮಾಣ

ಕ್ರಮ ಸಂ ಗಿಡಗಳ ವಯಸ್ಸು ಪ್ರಮಾಣ ಪ್ರತಿ ಗಿಡಕ್ಕೆ
01 3-5 ವರ್ಷ ¼ ಕೆ.ಜಿ
02 5-10 ವರ್ಷ 1 ಕೆ.ಜಿ
03 10-15 ವರ್ಷ 2-3 ಕೆ.ಜಿ
04 15 ವರ್ಷ ಮೆಲ್ಪಟ್ಟು 5 ಕೆ.ಜಿ

ಸುಣ್ಣದ ಪುಡಿಯನ್ನು ಗಿಡದ ಪಾತಿಯಲ್ಲಿ ಸಮನಾಗಿ ಉದುರಿಸಿ ನಂತರ ಹಗುರವಾಗಿ ನೆಲವನ್ನು ಅಗೆಯಬೇಕು, ಮಳೆ ಬಂದಾಗ ಸುಣ್ಣ ಕರಗಿ ಬೇರಿಗೆ ಲಭಿಸುತ್ತದೆ.

 • ಗಿಡಗಳನ್ನು ಪ್ರಾರಂಭಿಕ ವರ್ಷಗಳಲ್ಲಿ ಭೂಮಿಯ ಮಟ್ಟದಿಂದ 2-3 ಅಡಿವರೆಗೆ ಯಾವುದೇ ರೆಂಬೆಗಳು ಬೆಳೆಯದಿರುವಂತೆ ಕ್ರಮವಹಿಸುವುದು.
 • ಮಾವಿನ ಗಿಡಗಳಲ್ಲಿ ಒತ್ತಾಗಿ ಬೆಳೆದ ರೆಂಬೆಗಳನ್ನು ಕತ್ತರಿಸಿ ವಿರಳಗೊಳಿಸಿದರೆ ಸೂರ್ಯನ ಬೆಳಕು ಒಳಭಾಗದಲ್ಲಿ ಬೀಳುವಂತಾಗಿ ಒಳಭಾಗದಲ್ಲಿಯೂ ಕಾಯಿ ಕಚ್ಚುತ್ತವೆ.
 • ಗಿಡದ ರೆಂಬೆಗಳನ್ನು ಮುಖ್ಯವಾಗಿ ಗಿಡದ ಮಧ್ಯಭಾಗದಲ್ಲಿ (Centre open top pruning) ಒತ್ತಾಗಿ, ಒಣಗಿದ ಬೆಳೆದ ರೆಂಬೆಗಳನ್ನು ಗರಗಸದಿಂದ ನುಣುಪಾಗಿ ಕತ್ತರಿಸುವುದು, ಕತ್ತರಿಸಿದ ಭಾಗಕ್ಕೆ ಬೋರ್ಡೋ ಮುಲಾಮು ಹಚ್ಚುವುದು.
 • ರೆಂಬೆಗಳನ್ನು ಕತ್ತರಿಸಲು ಕೊಡಲಿಗಳನ್ನು ಉಪಯೋಗಿಸಬಾರದು, ಉಪಯೋಗಿಸಿದ ಸಂದರ್ಭಗಳಲ್ಲಿ ರೆಂಬೆ/ಕಾಂಡಗಳು ಸೀಳಿ ಗಿಡಗಳು ಹಾನಿಯಾಗುವ ಸಂಭವಿರುತ್ತದೆ.
 • ಸದರಿ ಪ್ರಕ್ರಿಯೆಯನ್ನು ಆಗಸ್ಟ್ ನಿಂದ ಅಕ್ಟೋಬರ್ ಅಂತ್ಯದ ಮಾಹೆಯೊಳಗೆ ಕೈಗೊಳ್ಳುವುದು ಸೂಕ್ತವಾಗಿರುತ್ತದೆ.
 • ಕತ್ತರಿಸಿದ/ಬೇರ್ಪಡಿಸಿದ ರೆಂಬೆ ಕೊಂಬೆಗಳನ್ನು ಮರದ ಬುಡದಲ್ಲಿ ಬಿಡದೆ ಬೇರೆಡೆಗೆ ಸಾಗಿಸಿ ವಿಲೇವಾರಿ ಮಾಡುವುದು.

ಮಾವು ಬೆಳೆಯಲ್ಲಿ ಕಾಂಡ ಕೊರಕ, ಓಟೆ ಕೊರಕ ಹುಳು, ಥ್ರಿಪ್ಸ್, ಚಿಬ್ಬು ರೋಗ, ಮಾವಿನ ಜೇಡ ಹುಳು ಮತ್ತು ಹಣ್ಣಿನ ನೊಣ, ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಹೂಬಿಡುವ ಪೂರ್ವದಲ್ಲಿ ಮತ್ತು ನಂತರದಲ್ಲಿ ಅವಶ್ಯಕವಾಗಿ ಸೀಲರ್ ಕಮ್ ಹೀಲರ್ ಮತ್ತು ಫೆರಮೋನ್ ಟ್ರ್ಯಾಪ್ಸ್ ಗಳನ್ನು ಬಳಸುವುದು.

ಹಣ್ಣುಗಳನ್ನು ಅವುಗಳ ಗಾತ್ರಕ್ಕನುಗುಣವಾಗಿ ವಿಂಗಡಿಸಬೇಕಾಗಿರುತ್ತದೆ. ಆಯಾ ದೇಶಗಳ ಬೇಡಿಕೆಗಳ ಅನುಗುಣವಾಗಿ ಹಣ್ಣಿನ ಗಾತ್ರವನ್ನು ಅನುಸರಿಸಿ ವಿವಿಧ ಗುಂಪುಗಳನ್ನಾಗಿ ವಿಂಗಡಿಸಬೇಕಾಗುತ್ತದೆ.

ಉದಾ: ಬಾದಾಮಿ ಹಣ್ಣನ್ನು ಇಂಗ್ಲೆಂಡ್, ಜರ್ಮನಿ ಹಾಗೂ ನೆದರ್ ಲ್ಯಾಂಡ್ ಗೆ ರಪ್ತು ಮಾಡಲು ಪ್ರತಿಯೊಂದು ಹಣ್ಣು 250-300 ಗ್ರಾಂ, ಮಧ್ಯ ಪ್ರಾಚ್ಯಕ್ಕೆ 200-250 ಗ್ರಾಂ ಇರಬೇಕಾಗುತ್ತದೆ. ಮಾವಿನಹಣ್ಣು ಉತ್ತಮ ಗುಣಮಟ್ಟವಾಗಿದ್ದು, ಎಲ್ಲಾ ತರಹದ ನ್ಯೂನ್ಯತೆಗಳಿಂದ ಮುಕ್ತವಾಗಿರಬೇಕು.

ಅಂದರೆ ಹಾಳಾದ, ರೋಗಗ್ರಸ್ಥ, ಗಾಯವಾದ ಪಕ್ವವಿಲ್ಲದ, ನೋಡಲು ಸರಿಯಾದ ಗಾತ್ರ ಹಾಗೂ ರೂಪ ಇಲ್ಲದಿರುವ ಹಣ್ಣು ಆಗಿರಬಾರದು. ಹಣ್ಣುಗಳು ಒಂದಕ್ಕೊಂದು ತಾಗದಂತೆ ಕಂಪಾರ್ಟ್ ಮೆಂಟ್ ಮತ್ತು ಹಣ್ಣುಗಳಿಗೆ ಕುಷನ್ ಸ್ಲೇವ್ ಅಳವಡಿಸಬೇಕಾಗುತ್ತದೆ. ಅಥವಾ ಪೇಪರ್ ಶ್ರೇಡ್ ಗಳನ್ನು ಸಹ ಹಾಕುವುದರ ಮೂಲಕ ಹಣ್ಣುಗಳ ನಡುವಿನ ಘರ್ಷಣೆ ತಪ್ಪಿಸಬಹುದಾಗಿದೆ.

ಮಾವಿನ ಹಣ್ಣುಗಳನ್ನು ಸ್ಥಳೀಯ ಅಥವಾ ದೂರ ದೇಶದ ಮಾರುಕಟ್ಟೆಗೆ ರವಾನಿಸಲು ಹಲವು ನಮೂನೆಯ ಪೆಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ಹಣ್ಣುಗಳನ್ನು ಕಾಗದದ ರಟ್ಟಿನ ಪೆಟ್ಟಿಗೆಗಳಲ್ಲಿ ಒಂದು ಅಥವಾ ಅನೇಕ ಪದರಗಳಲ್ಲಿ ಜೋಡಿಸಿ ಕಟ್ಟುತ್ತಾರೆ. ಇದರಲ್ಲಿ ಮರದ ಹೊಟ್ಟು, ಭತ್ತದ ಹುಲ್ಲು ಅಥವಾ ಕಾಗದದ ಚೂರುಗಳನ್ನು ಮೆತ್ತನೆಯ ವಸ್ತುವಾಗಿ ಉಪಯೋಗಿಸುತ್ತಾರೆ. ಮರದ ಅಥವಾ ನೂಲುಯುಕ್ತ ಕಾಗದದ ರಟ್ಟಿನ ಪೆಟ್ಟಿಗೆಯಲ್ಲಿ ಒಂದು ಅಥವಾ ಎರಡು ಪದರಗಳಲ್ಲಿ 4 ಅಥವಾ 14 ಕೊಡಗಳಾಗಿ ವಿಂಗಡಿಸಿ ಇಡಲಾಗುವುದು. ಪ್ರತಿ ಪೆಟ್ಟಿಗೆಯ ಗಾತ್ರ ಸಾಮಾನ್ಯವಾಗಿ (45x26x7 ಸೆಂ.ಮೀ.) ಅಥವಾ (32x26x10 ಸೆಂ. ಮೀ) ಇರುತ್ತದೆ.

Corrugated card board fibre boxes (Cartoon boxes):

(37*27*11ಸೆಂ.ಮೀ.LxBXH) ಅಳತೆಯ- 3Ply ಸಾರ್ಮಥ್ಯದ, 180GSM ಗಾತ್ರದ, +40KG/CMಮತ್ತು 20mm ಸುತ್ತಳತೆಯ, ಕನಿಷ್ಟ 8 ಸಂಖ್ಯೆಯ ತೂತುಗಳನ್ನು ಬಿಡತಕ್ಕದ್ದು.

ಸಂಗ್ರಹಣೆ:

ಮಾವನ್ನು ಉತ್ತಮವಾಗಿ ಗಾಳಿ ಆಡುವಂತಹ ಜಾಗದಲ್ಲಿ 30+20  ಸೆಲ್ಸಿಯಸ್ ಉಷ್ಣ ತಾಪಮಾನ ಹಾಗೂ ಶೇ.60 ರಿಂದ 85 ತೇವಾಂಶ ಇರುವಂತಹ ಸ್ವಚ್ಛವಾದ ಕೊಠಡಿಯಲ್ಲಿ ಸಂಗ್ರಹಿಸಿಡಬೇಕು. ಇಂತಹ ವಾತಾವರಣದಲ್ಲಿ ಬಾದಾಮಿ  12 ರಿಂದ 16 ದಿವಸಗಳವರೆಗೆ, ನೀಲಂ, ರಸಪೂರಿ ಹಾಗೂ ಮಲಗೋವ 8 ರಿಂದ 12 ದಿನಗಳವರೆಗೆ, ತೋತಾಪುರಿ 16 ರಿಂದ 20 ದಿನಗಳವರೆಗೆ ಕೆಡದಂತೆ ಇರಬಲ್ಲದು. ಶೀತಲಗೃಹದಲ್ಲಿ 8-100  ಸಿ. ಉಷ್ಣ ತಾಪಮಾನದಲ್ಲಿ ಶೇಕಡಾ 85-90  ಸಂಬಂಧಿತ ಆರ್ದ್ರತೆಯಲ್ಲಿ 4-5 ವಾರಗಳವರೆಗೆ ಸಂಗ್ರಹಿಸಿಡಬಹುದು.

ಗಿಡಗಳನ್ನು ನೆಡುವಾಗ ಪ್ರತಿ ಗುಂಡಿಗೆ 50 ಕಿ.ಗ್ರಾಂ. ಕೊಳೆತ ಕೊಟ್ಟಿಗೆ ಗೊಬ್ಬರದ ಜೊತಗೆ ಅರ್ಧ ಕಿ.ಗ್ರಾಂ ಬೇವು ಅಥವಾ ಹೊಂಗೆ ಹಿಂಡಿಯನ್ನು ಕೊಡಬೇಕು ಹಾಗೂ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಅಜೋಸ್ಪೈರುಲಂ, ಮೈಕೊರೈಜಾ ರಂಜಕವನ್ನು ಕರಗಿಸುವ ಬ್ಯಾಕ್ಟೀರಿಯಾ (ಪಿ.ಎಸ್.ಬಿ) ಗಳನ್ನು ಪ್ರತಿ ಗುಂಡಿಗೆ ಐದು ಗ್ರಾಂ ಪ್ರಮಾಣದಲ್ಲಿ ಕೊಡುವುದರಿಂದ ಬೇರುಗಳ ಬೆಳವಣಿಗೆಗೆ ಸಹಾಯಕವಾಗಿ ಗಿಡಗಳು ದಷ್ಟಪುಷ್ಟವಾಗಿ ಬೆಳೆಯಲು ಪ್ರಚೋದನೆ ನೀಡುವುದು.

ಮಾವಿನ ಹಣ್ಣು ಊಜಿ ನೊಣದ ನಿಯಂತ್ರಣಕ್ಕಾಗಿ ಕಟ್ಟಿರುವ ಲಿಂಗಾಕರ್ಷಕ ಮೋಹಕ ಬಲೆಗಳಲ್ಲಿ ಹೊಸ ಮೋಹಕವನ್ನು ಹಾಕುವುದು. ಹಾನಿಗೆ ತುತ್ತಾಗಿ ಕೆಳಗೆ ಬಿದ್ದಿರುವ ಹಣ್ಣುಗಳನ್ನು ಆಯ್ದು ಗುಂಡಿ ತೆಗೆದು ಹೂಳುವುದು ಅಥವಾ ಸುಟ್ಟು ನಾಶಪಡಿಸಬೇಕು. ಮಾವಿನ ವಾಟೆ ಕೊರೆಯುವ ಹುಳದ ನಿಯಂತ್ರಣಕ್ಕಾಗಿ ಮಾರ್ಚ್ ಮಾಹೆಯಲ್ಲಿ ತಿಳಿಸಿದ ಪ್ರಕಾರ ಕ್ರಮ ಕೈಗೊಳ್ಳುವುದು.

ಹಣ್ಣು ಪಕ್ವವಾಗುವ ಹಂತದಲ್ಲಿ (ಕಟಾವಿಗೆ ಒಂದು ತಿಂಗಳು ಮುಂಚೆ) ಮರದ ಕಾಂಡದ ಬೊಡ್ಡೆ ಉಪಚಾರ ಮಾಡಿ ಹಣ್ಣಿನ ನೊಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ವಿಧಾನ: 1 ಲೀಟರ್ ನೀರಿಗೆ 100 ಗ್ರಾಂ ಬೆಲ್ಲ ಮತ್ತು 5 ಮಿ.ಲೀ. ಮೆಲಾಥಿಯಾನ್ ಅಥವಾ ಡೆಕಾಮೆಥ್ರಿನ್ ಕೀಟನಾಶಕ ಬೆರೆಸಿ ಕಾಂಡದ ಮೇಲೆ ಭೂಮಿಯಿಂದ 3 ಅಡಿ ಎತ್ತರದವರೆಗೆ ಬ್ರಷ್ ಸಹಾಯದಿಂದ ಮೂರು ಪಟ್ಟೆ ರೂಪದಲ್ಲಿ ಬಳಿಯುವುದು. ಈ ಪದ್ಧತಿಯನ್ನು  ಕಟಾವು ಆಗುವವರೆಗೆ ವಾರಕ್ಕೊಮ್ಮೆ ಪಾಲಿಸಿದಲ್ಲಿ ಗಂಡು ಮತ್ತು ಹೆಣ್ಣು ನೊಣಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ.

ಮಾವಿನಲ್ಲಿ ಹಣ್ಣಿನ ನೊಣದ ಭಾದೆಯಿಂದ ಸರಾಸರಿ ಶೇಕಡ 25 ರಷ್ಟು ಇಳುವರಿ ನಷ್ಟ ಸಂಭವಿಸಿ ಹಾಗೂ ಗುಣಮಟ್ಟ ಹಾನಿಗೊಂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿ ಮಾವು ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗುತ್ತದೆ. ಈ ಕೀಟವನ್ನು ರೈತರು ಸಾಮೂಹಿಕವಾಗಿ ಮತ್ತು ಸಮಗ್ರವಾಗಿ ಹತೋಟಿ ಕ್ರಮ ಕೈಗೊಂಡರೆ ಮಾತ್ರ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ಹಣ್ಣಿನ ನೊಣದ ಹಾನಿ:

 • ಬಲಿತ ಕಾಯಿಗಳ ಮೇಲೆ ಹೆಣ್ಣು ನೊಣಗಳು ತಮ್ಮ ಚೂಪಾದ ಅಂಡಪ್ರಸವಾಂಗದಿಂದ (Ovipositor) ಚುಚ್ಚಿ ಸಿಪ್ಪೆಯ ಒಳಭಾಗದ ತಿರುಳಿನಲ್ಲಿ ಸುಮಾರು 1-4 ಮಿ.ಮೀ. ಆಳದಲ್ಲಿ  6-10  ಮೊಟ್ಟೆಗಳನ್ನು ಗುಂಪಲ್ಲಿ ಇಡುತ್ತವೆ.
 • ತಿರುಳಿನ ಒಳಗೆ ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ತಿರುಳನ್ನು ತಿನ್ನುತ್ತಾ ಬೆಳೆಯುತ್ತವೆ. (6-8 ದಿನ) ಆಗ ಹಣ್ಣಿನ ತಿರುಳು ಕೊಳೆಯಲು ಕಾರಣವಾಗುತ್ತದೆ. ತದನಂತರ ಭಾದೆಗೊಂಡ ಹಣ್ಣು/ಕಾಯಿಗಳ ಮೇಲೆ ರಂಧ್ರಗಳು ಕಂಡು ಬಂದು ನಿರೀಕ್ಷೆಗಿಂತ ಮುಂಚೆ ಹಣ್ಣಾಗಿ, ಕೊಳೆತು ಉದುರಿ ಬೀಳುತ್ತವೆ.
 • ಹಣ್ಣಿನ ನೊಣಗಳು ಮರದಲ್ಲಿನ ಕಾಯಿಗಳಿಗೆ ಹಾನಿ ಮಾಡುವದರ ಜೊತೆಗೆ ಕೊಯ್ಲಿನ ನಂತರ ಮಾರುಕಟ್ಟೆಗೆ ಸಾಗಿಸುವಾಗಲೂ ಸಹ ಕಾಯಿಗಳ ಮೇಲೆ ಮೊಟ್ಟೆ ಇಡುತ್ತವೆ. ಇಂತಹ ಕಾಯಿಗಳ ಶೇಖರಣಾ ಅವಧಿ ಕುಂಠಿತಗೊಳ್ಳುತ್ತದೆ.
 • ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇವುಗಳ ಪ್ರಭಾವ/ಭಾದೆ ಹೆಚ್ಚಾಗಿದ್ದು, ಭಾದೆಗೊಂಡ ಹಣ್ಣುಗಳು ನೆಲಕ್ಕೆ ಬೀಳುತ್ತವೆ. ಅವುಗಳಿಂದ ಹೊರ ಬಂದ ಮರಿಗಳು ಮಣ್ಣಿನಲ್ಲಿ (5-10 ಸೆ.ಮೀ. ಆಳದಲ್ಲಿ) ಕೋಶಾವಸ್ಥೆಗೆ ಹೋಗುತ್ತವೆ. ಕೋಶಾವಸ್ಥೆಯಿಂದ ಹೊರ ಬಂದ ವಯಸ್ಕ ಕೀಟಗಳು ಹಲವು ತಿಂಗಳು ಬದುಕುತ್ತವೆ.

ಹಾನಿ ಅವಧಿ ಮತ್ತು ಜೀವನ ಚಕ್ರ:
ಈ ನೊಣವು ದಕ್ಷಿಣ ಭಾರತದಲ್ಲಿ ವರ್ಷ ಪೂರ್ತಿ ಚಟುವಟಿಕೆಯಿಂದ ಇದ್ದು, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಇವುಗಳ ಪ್ರಭಾವ ಹೆಚ್ಚಾಗಿರುತ್ತದೆ. ಒಂದಾದ ಮೇಲೊಂದರಂತೆ ಹಲವು ಜೀವನ ಚಕ್ರ ಪೂರೈಸುತ್ತಾ ವರ್ಷ ಪೂರ್ತಿ ಬದಕುವ ಹಣ್ಣಿನ ನೊಣಕ್ಕೆ ಮೇ – ಜುಲೈ ತಿಂಗಳಲ್ಲಿ ಇರುವ ಅಧಿಕ ಉಷ್ಣ ಮತ್ತು ಆರ್ದ ವಾತಾವರಣ ಇದರ ಸಂತಾನಾಭಿವೃದ್ದಿಗೆ ಸಹಾಯಕ. ಏಪ್ರಿಲ್ ನಂತರ ಮಣ್ಣಿನಲ್ಲಿರುವ ಕೋಶಾವಸ್ಥೆಯಿಂದ ವಯಸ್ಕ ಕೀಟಗಳಾಗಿ ಹೊರಹೊಮ್ಮಿ ಹಲವು ತಿಂಗಳು ಬದುಕಿರುತ್ತವೆ. ಇದೆ ನೊಣ ಇತರೆ ಹಲವಾರು ಹಣ್ಣಿನ ಬೆಳೆಗಳ ಮೇಲೆ ಕೂಡಾ ಹಾನಿ ಉಂಟು ಮಾಡುವುದರಿಂದ ವರ್ಷ ಪೂರ್ತಿ ಚಟುವಟಿಕೆಯಿಂದ ಇದ್ದು, ತೋಟಗಳಲ್ಲಿ ಒಂದಲ್ಲಾ ಒಂದು ಅವಸ್ಥೆಯಲ್ಲಿ ತನ್ನ ಉಪಸ್ಥಿತಿ ತೋರುತ್ತದೆ ಮತ್ತು ಪೂರಕ ವಾತಾವರಣ ಹಾಗೂ ನಿಯಂತ್ರಣ ಕ್ರಮಗಳನ್ನು ಅನುಸರಿಸದ ತೋಟಗಳಲ್ಲಿ ಬೆಳೆಗೆ ಅಪಾರ ಹಾನಿ ಉಂಟು ಮಾಡುತ್ತವೆ.

ಮಾವಿನ ಹಣ್ಣು ಊಜಿ ನೊಣದ ನಿಯಂತ್ರಣಕ್ಕಾಗಿ ಪ್ರತಿ ಎಕರೆಗೆ 8 ರಿಂದ 10 ಲಿಂಗಾಕರ್ಷಕ ಮೋಹಕ ಬಲೆಗಳನ್ನು (ಮಿಥೈಲ್ ಯುಜಿನಾನ್) ಕಟ್ಟುವುದು.

ಮಾವಿನ ವಾಟೆ ಕೊರಕದ ನಿಯಂತ್ರಣಕ್ಕಾಗಿ  ಕಾಯಿ ನಿಂಬೆ ಹಣ್ಣಿನ ಗಾತ್ರವಾದಾಗ ಅಸಿಫೇಟ್ (75 ಎಸ್.ಪಿ.) 1.5 ಗ್ರಾಂ ಅಥವಾ ಡೆಕಾಮೆಥ್ರಿನ್ 1 ಮಿಲಿ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪಡಿಸುವುದು.

ಸೂಚನೆ: ವಿದೇಶಕ್ಕೆ ರಪ್ತು ಮಾಡಲು ಬಯಸುವ ರೈತರು ಅಸಿಫೇಟ್ ಬದಲಿಗೆ ಡೆಕಾಮೆಥ್ರಿನ್ ಮಾತ್ರ ಸಿಂಪಡಿಸುವುದು

ಮಾವು ಹಂಗಾಮಿನ ಅವಧಿ ಪ್ರಾರಂಭದಲ್ಲಿ ನೆರೆರಾಜ್ಯಗಳಲ್ಲಿನ cultar ಬಳಸಿ ಅವಧಿಪೂರ್ವ ಹೂವು ಮತ್ತು ಕಾಯಿ ಕಚ್ಚಿಸಿ ಬೆಳೆಸಿದ ಮಾವಿನ ಹಣ್ಣುಗಳನ್ನು ಹೆಚ್ಚಿನ ಬೆಲೆಗೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ರೈತರಿಗೆ ಹೆಚ್ಚು ಲಾಭಗಳಿಸಲು
ಹಾಗೂ ಮಾರುಕಟ್ಟೆ ಅವಕ ಮತ್ತು ದರ ಕುಸಿತದಿಂದ ಪಾರಾಗಲು ಈ ಕೆಳಕಂಡಂತೆ ಪ್ರಚೋದಕದ ಪ್ರಮಾಣವನ್ನು ಬಳಸಬಹುದಾಗಿದೆ:

ಕ್ರ.ಸಂ. ಮಾವಿನ ಗಿಡದ ವಯಸ್ಸು Cultar ಪ್ರತಿ ಗಿಡಕ್ಕೆ ಉಪಯೋಗಿಸುವ ಸಮಯ
01 10-15 ವರ್ಷ 15ಮಿ.ಲಿ/10ಲೀ. ನೀರಿನಲ್ಲಿ            ಮಿಶ್ರಣ. ಸೆಪ್ಪೆಂಬರ್ 15 ರ ಒಳಗೆ ಅಥವಾ ಹೂ ಬಿಡುವ 100ದಿನ ಮುಂಚಿತವಾಗಿ, ತಾಯಿ ಬೇರುಗಳಿಗೆ ಮಣ್ಣಿನ ಮೂಲಕ ನೀಡುವುದು.
02 15-20 ವರ್ಷ 20ಮಿ.ಲಿ/10ಲೀ. ನೀರಿನಲ್ಲಿ            ಮಿಶ್ರಣ.
03 20-40 ವರ್ಷ 25ಮಿ.ಲಿ/10ಲೀ. ನೀರಿನಲ್ಲಿ ಮಿಶ್ರಣ.
04 40-50 ವರ್ಷ ಮೇಲ್ಪಟ್ಟು 40ಮಿ.ಲಿ/10ಲೀ. ನೀರಿನಲ್ಲಮಿಶ್ರಣ.

ಬಳಸುವ ವಿಧಾನ :

 • ಮರದ ಕಾಂಡದಿಂದ 3 ರಿಂದ 3 1/2 ಅಡಿ ದೂರದಲ್ಲಿ 4-6 ಇಂಚಿನಷ್ಟು ಆಳದ ಪಾತಿ ಮಾಡಿ ಈ ಪಾತಿಗಳಲ್ಲಿ ಪ್ರಚೋದಕವನ್ನು ಹಾಕಬೇಕು.
 • ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬಾದಾಮಿ/ಅಪೂಸ್ ತಳಿಗಳಿಗೆ ಮಾತ್ರ Cultar ಬಳಕೆಯನ್ನು ಸೀಮಿತಗೊಳಿಸಲು ನಿರ್ಣಯಿಸಲಾಯಿತು.
 • ಅವಧಿಪೂರ್ವ ಹೂ ಬಿಡುವುದನ್ನು ಪ್ರೇರೇಪಿಸಲು Cultar ಬಳಕೆಯನ್ನು ಮಾಡುವುದು.

Culter (Pachlobutozole) ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

 • ಬೇಸಿಗೆ ಅವಧಿಯಲ್ಲಿ ಕನಿಷ್ಟ 2-3 ಮೂರು ಬಾರಿ ಅತ್ಯವಶ್ಯಕವಾಗಿ ನೀರಿನ್ನು ನೀಡವುದು ಅಗತ್ಯ.
 • ನಿರ್ಣಾಯಕ ಹಂತದಲ್ಲಿ ನೀರನ್ನು ಒದಗಿಸಿವುದು.

ಹನಿ ನೀರಾವರಿ ವ್ಯಸಸ್ಥೆ ಸಹ ಕಲ್ಪಿಸಬಹುದಾಗಿದೆ.

ಭಾರತ ಸರ್ಕಾರದ Gazette ಪ್ರಕಟಣೆ ದಿನಾಂಕ:26.08.2016 ರಂತೆ ಸಂಖ್ಯೆ, ನಂ.334, ನವದೆಹಲಿ ಪ್ರಕಾರ “Provided that fruits may be artificial ripened by use of ethylene gas at a concentration upto 100 ppm (100µl /L) depending upon the crop variety and maturity” ರಂತೆ ಹಣ್ಣು ಮಾಗಿಸಲು ಕಾರ್ಬೈಡ್ ರಾಸಾಯನಿಕ ಬಳಸುವುದು ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಕಾರ್ಬೈಡ್ ಮುಕ್ತ ನೈಸರ್ಗಿಕ ಇಥೈಲಿನ್ ಅನಿಲದ ಮೂಲಕ ಹಣ್ಣು ಮಾಗಿಸಲು ಅವಶ್ಯವಿರುತ್ತದೆ.

Peak flowering ನಂತರದ 90-95 ದಿನಗಳ ನಂತರ ಶೇ.80 ರಷ್ಟು ಬಲಿತ ಮಾವಿನ ಹಣ್ಣುಗಳನ್ನು ಕಟಾವು ಮಾಡಿ Etheral/Ethephon ನ್ನು ಬಳಸಿ ಮಾಗಿಸಿದ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು.

ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ರಾಜ್ಯದ ಮಾವನ್ನು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು “ಕಾರ್ ಸಿರಿ” (ಕರ್ನಾಟಕದ ಸಂಪತ್ತು) ಬ್ರಾಂಡ್ ನಡಿ ಟ್ರೇಡ್ ಮಾರ್ಕ್ ಚಿಹ್ನೆ ಮತ್ತು ವಿನ್ಯಾಸವನ್ನು ನೊಂದಾಯಿಸಲಾಗಿರುತ್ತದೆ.

ವೈಯಕ್ತಿಕ ಮಾವು ಬೆಳೆಗಾರರು ಆಸಕ್ತಿ ಹೊಂದಿದಲ್ಲಿ ಟ್ರೇಡ್ ಮಾರ್ಕ್ ಚಿಹ್ನೆ ಮತ್ತು ವಿನ್ಯಾಸವನ್ನು ನೊಂದಾಯಿಸಬಹುದಾಗಿದೆ.